ವಿಷಯಕ್ಕೆ ಹೋಗಿ

ಹಾಸನ :ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆ

ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆ ಹಾಸನ,ನ.01(ಕರ್ನಾಟಕ ವಾರ್ತೆ):- ಜಿಲ್ಲಾಡಳಿತದ ವತಿಯಿಂದ ಇಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣ ವಾಗಿ ಆಚರಿಸಿಲಾಯಿತು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ. ಗೋಪಾಲಯ್ಯ ಅವರು ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಸಂದೇಶ ನೀಡಿದರು. ಕರ್ನಾಟಕ ರಾಜ್ಯದ ಉದಯ, ನಾಡು ನುಡಿಯ ಹಿರಿಮೆ ಗರಿಮೆ, ಪರಂಪರೆ, ಇತಿಹಾಸ, ಐತಿಹಾಸಿಕ ಸ್ಥಳಗಳ ಬಗ್ಗೆ ವಿವರಿಸಿ ಮೆಚ್ಚುಗೆಯ ನುಡಿಗಳನ್ನಾಡಿದರು ಹಾಗೂ ರಾಜ್ಯವನ್ನಾಳಿದ ರಾಜ ಮನೆತನಗಳು, ನಾಡು ನುಡಿಯನ್ನ ಕಟ್ಟಿ ಬೆಳೆಸಿದ ಮಹನೀಯರನ್ನು ಸ್ಮರಿಸಿದ ಸಚಿವರು ಮುಂದೆಯೂ ಸಾಮರಸ್ಯದ ಸಹಬಾಳ್ವೆ ಮೂಲಕ ಎಲ್ಲರೂ ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸೋಣ ಎಂದು ಸಚಿವ ಗೋಪಾಲಯ್ಯ ಅವರು ಕರೆ ನೀಡಿದರು. ಇದೇ ವೇಳೆ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿರುವ ಹಂಪನಹಳ್ಳಿ ತಿಮ್ಮೇಗೌಡ, ಅನುಸೂಯಮ್ಮ ಹಾಗೂ ಜಿಲ್ಲಾ ಮಟ್ಟದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಗಣ್ಯರು ಸಾಧಕರು ಹಾಗೂ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಸೇವೆ ಸಲ್ಲಿಸಿದ ಸರ್ಕಾರಿ ಹಾಗೂ ಖಾಸಗಿ ವೈದ್ಯರು, ಅಧಿಕಾರಿ ಸಿಬ್ಬಂದಿ, ಪೋಲಿಸ್ ಅಧಿಕಾರಿಗಳು, ನಗರಸಭೆ ನೌಕರರು ಹಾಗೂ ರೈತರನ್ನು ಜಿಲ್ಲಾಡಳಿತದ ಪರವಾಗಿ ಸಚಿವರು ಸನ್ಮಾನಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೋವಿಡ್ ಜಾಗೃತಿ ಗೀತೆಗಳ ಗಾಯನ, ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕನ್ನಡ ನಾಡಿನ ಹಿರಿಮೆ ಸಾರುವ ಹಾಡುಗಳನ್ನು ಪ್ರಸ್ತುತ ಪಡಿಸಲಾಯಿತು. ಸಚಿವರು ಕನ್ನಡ ರಾಜ್ಯೋತ್ಸವದಲ್ಲಿ ನೀಡಿದ ಸಂದೇಶದ ಸಂಪೂರ್ಣ ವಿವರ: ವಿವಿಧತೆಯಲ್ಲಿ ಏಕತೆಗೆ ಹೆಸರಾಗಿರುವ ಕರ್ನಾಟಕ, ತನ್ನದೇ ಆದ ಐತಿಹಾಸಿಕ, ಸಾಂಸ್ಕøತಿಕ ಶ್ರೀಮಂತಿಕೆಯಿಂದ ಜಗತ್ತಿನಾದ್ಯಂತ ಹೆಸರಾಗಿದೆ ಅದಕ್ಕೆಲ್ಲಾ ಕಾರಣರಾದ ನಮ್ಮ ಹಿರಿಯರಿಗೆ ಈ ನಾಡನ್ನು ಕಟ್ಟಿದ ಗಣ್ಯರಿಗೆ ಕೃತಜ್ಞತಾ ನಮನ ಸಲ್ಲಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಸಚಿವರು ತಿಳಿಸಿದರು. ಕನ್ನಡ ಭಾಷೆಗೆ 3 ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಕಿ.ಪೂ.2ನೇ ಶತಮಾನದಲ್ಲೇ ಕನ್ನಡ ಭಾಷೆ, ಸಾಹಿತ್ಯ ಇತ್ತೆಂದು ವಿದ್ವಾಂಸರು ಪ್ರತಿಪಾದಿಸಿದ್ದಾರೆ. ಆ ನಂತರದಲ್ಲಿ ಹಂತ ಹಂತವಾಗಿ ವಿವಿಧ ಸ್ವರೂಪಗಳಲ್ಲಿ ನಮ್ಮ ಭಾಷೆ, ಸಂಸ್ಕೃತಿ, ಪದ್ಧತಿ, ಪರಂಪರೆಗಳು ಬೆಳೆದು ಬಂದಿವೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ನಮ್ಮ ಸಾಹಿತ್ಯಿಕ ಶ್ರೀಮಂತಿಕೆಯ ಸಂಕೇತವಾಗಿದೆ ಎಂದು ಅವರು ತಿಳಿಸಿದರು. ಶಾತವಾಹನರು, ಚಾಲುಕ್ಯರು, ಕದಂಬರು, ರಾಷ್ಟ್ರಕೂಟರು, ಸೇವುಣರು, ಹೊಯ್ಸಳರು, ತಲಕಾಡು ಗಂಗರು, ವಿಜಯನಗರ ಅರಸರು, ನಾಯಕರು, ಬಹುಮನಿ ಸುಲ್ತಾನರು, ಬ್ರಿಟೀಷರು ಸೇರಿದಂತೆ ಹತ್ತು ಹಲವು ಆಳರಸರ ಆಡಳಿತದಲ್ಲಿ ನಮ್ಮ ಸ್ವಂತಿಕೆಯನ್ನು ಉಳಿಸಿಕೊಂಡು ಬಂದ ಹೆಮ್ಮೆ ಕನ್ನಡಿಗರದ್ದು ಎಂದು ಸಚಿವರು ಹೇಳಿದರು. ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ, ಸಂಗೊಳ್ಳಿರಾಯಣ್ಣ, ಮದಕರಿನಾಯಕರಂತಹ ಕೆಚ್ಚೆದೆಯ ಕಲಿಗಳ ವೀರ ಪರಂಪರೆಯೂ ನಮ್ಮಲ್ಲಿದೆ. ಅದೇ ರೀತಿ ಕರ್ನಾಟಕ ಶಿಲ್ಪಕಲೆಗಳ ತವರೂರು ಸಹ. ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಈ ಜಿಲ್ಲೆಯ ವಿಶ್ವವಿಖ್ಯಾತ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಾದರೆ, ಹಂಪೆ,ಬಾದಾಮಿ,ಐಹೊಳೆ, ಪಟ್ಟದಕಲ್ಲು ಹೀಗೆ ನೂರಾರು ಸ್ಥಳಗಳು ನಮ್ಮ ನಾಡಿನ ಭವ್ಯ ಪರಂಪರೆ ಇತಿಹಾಸವನ್ನು ಇಂದಿಗೂ ಸಾರುತ್ತವೆ ಎಂದು ಅವರು ಮಾಹಿತಿ ನೀಡಿದರು. ನಮ್ಮ ಹೆಮ್ಮೆಯ ಕನ್ನಡಕ್ಕೆ ಪಾಶ್ಚಿಮಾತ್ಯರ ಕೊಡುಗೆಯೂ ಸ್ಮರಣೀಯ. ರೆವರೆಂಡ್ ಕಿಟಲ್, ಬಿ.ಎಲ್.ರೈಸ್, ಬಿ.ಪಿ.ರೈಸ್ ಮತ್ತಿತರರು ಹಾಗೂ ಲಂಡನ್ ಮಿಷನರಿ, ಬಾಸೆಲ್ ಮಿಷನ್, ವೆಸ್ಲಿಯನ್ ಮಿಷನರಿಗಳು ನಮ್ಮ ಭಾಷಾ ಬೆಳವಣಿಗೆಗೆ ನೆರವಾಗಿವೆ. ಮೈಸೂರು ಒಡೆಯರು, ಬೆಂಗಳೂರು ಕಟ್ಟಿದ ನಾಡ ಪ್ರಭು ಕೆಂಪೇಗೌಡರು, ಅದೇ ರೀತಿ ರಾಜ್ಯಕ್ಕೆ ಬೆಳಕು, ಬೆಳೆಗೆ ನೀರು ನೀಡಿ ರಾಷ್ಟ್ರಕ್ಕೆ ಮಾದರಿ ಎನಿಸಿದ ಭಾರತರತ್ನ ಡಾ. ಸರ್.ಎಂ.ವಿಶ್ವೇಶ್ವರಯ್ಯನವರನ್ನೂ ಕೃತಜ್ಞತಾ ಪೂರ್ವಕವಾಗಿ ಸ್ಮರಿಸಿದರು. ಇನ್ನು ರಾಜ್ಯದ ಮಟ್ಟಿಗೆ ಹೇಳುವುದಾದರೆ ಮನುಕುಲ ತಾನೊಂದೇ ವಲಂ ಎಂದು ಸಾರಿದ ಆದಿ ಕವಿ ಪಂಪನಿಂದ ಹಿಡಿದು ರನ್ನ, ಜನ್ನ, ಪೊನ್ನ, ಹರಿಹರ, ರಾಘವಾಂಕ, ಕುಮಾರ ವ್ಯಾಸ, ಕುವೆಂಪು, ಬೇಂದ್ರೆ, ಮಾಸ್ತಿ, ಗಿರೀಶ್ ಕಾರ್ನಾಡ್, ಯು.ಆರ್.ಅನಂತಮೂರ್ತಿ, ಚಂದ್ರಶೇಖರ ಕಂಬಾರ ಮತ್ತಿತರ ಶ್ರೇಷ್ಠ ಕವಿಗಳು, ಸಾಹಿತಿಗಳು, ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸರ್ವಜ್ಞರಂತಹ ಶ್ರೇಷ್ಠ ವಚನಕಾರರು, ಸಮಾಜ ಸುಧಾರಕರು, ಪುರಂದರ ದಾಸ, ಕನಕದಾಸರಂತಹ ದಾರ್ಶನಿಕರು, ನಮ್ಮ ಬದುಕಿನ ದಾರಿಗೆ ದೀಪ ಹಚ್ಚಿ ಬೆಳಗಿದ್ದಾರೆ. ಕುವೆಂಪು ವಿಶ್ವ ಮಾನವ ಸಂದೇಶವನ್ನೇ ಸಾರಿದ್ದಾರೆ ಎಂದು ಕೆ. ಗೋಪಾಲಯ್ಯ ಅವರು ತಿಳಿಸಿದರು. ಕನ್ನಡದ ಪ್ರಥಮ ಶಿಲಾ ಶಾಸನ ಹಲ್ಮಿಡಿ ಶಾಸನ ದೊರೆತಿರುವುದು ಹಾಸನ ಜಿಲ್ಲೆಯಲ್ಲಿಯೇ. ದೇಶದ ಪ್ರಧಾನಿಯಾಗಿದ್ದ ರಾಜ್ಯದ ಏಕೈಕ ಕನ್ನಡಿಗರಾದ ಹೆಚ್.ಡಿ. ದೇವೇಗೌಡ ಅವರು ಈ ಜಿಲ್ಲೆಯ ಕೊಡುಗೆಯೇ. ಅದೇ ರೀತಿ ಎಸ್.ಎಲ್.ಭೈರಪ್ಪ, ಅ.ನ.ಕೃ., ಎಸ್.ಕೆ.ಕರೀಂಖಾನ್, ಡಾ:ಗೊರೂರು ರಾಮಸ್ವಾಮಿ ಅಯ್ಯಂಗಾರ್, ರಾಜಾರಾಯರು, ಶಾರದಾ ಪ್ರಸಾದ್, ಹಾರ್ನಳ್ಳಿ ರಾಮಸ್ವಾಮಿ, ಕಿರಂ ನಾಗರಾಜ್, ಕ್ಯಾಪ್ಟನ್ ಗೋಪಿನಾಥನ್, ಗರುಡನಗಿರಿ ನಾಗರಾಜ್, ಜಾವಗಲ್ ಶ್ರೀನಾಥ್, ಪ್ಯಾರಾ ಒಲಂಪಿಯನ್ ಗಿರೀಶ್ ಮುಂತಾದ ಮಹತ್ವದ ಮುತ್ತುಗಳು ಈ ಮಣ್ಣಿನಲ್ಲಿ ಅರಳಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕಂಪನ್ನು ಪಸರಿಸಿವೆ ಎಂದರು. ಇನ್ನ ನಮ್ಮ ರಾಜ್ಯದ ಇತಿಹಾಸವನ್ನು ಗಮನಿಸುವುದಾದರೆ ಸ್ವಾತಂತ್ರ್ಯಾನಂತರ 1950ರಲ್ಲಿ ಒಡೆಯರ್ ಮೈಸೂರು ಸಂಸ್ಥಾನವನ್ನು ಭಾರತ ಸರ್ಕಾರದಲ್ಲಿ ವಿಲೀನಗೊಳಿಸಿದ ನಂತರ ಮೈಸೂರು ರಾಜ್ಯ ಸ್ಥಾಪನೆಯಾಯಿತು. ಭಾಷಾವಾರು ಪ್ರಾಂತ್ಯಗಳ ರಚನೆಯಿಂದಾಗಿ ಕೊಡಗು, ಹಳೆ ಮದರಾಸು, ಹೈದರಾಬಾದ್, ಮುಂಬೈ ಪ್ರಾಂತ್ಯದ ಕನ್ನಡ ಭಾಷಿಕ ಭೂ ಪ್ರದೇಶಗಳನ್ನು ಸೇರ್ಪಡೆಗೊಳಿಸಿ 1956ರ ನವೆಂಬರ್ 1ರಂದು ಮೈಸೂರು ರಾಜ್ಯ ಉದಯವಾಯಿತು. ಆ ನಂತರ 1973ರಲ್ಲಿ ದಿವಂಗತ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಇಚ್ಛಾಶಕ್ತಿಯಿಂದಾಗಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಯಿತು. ಅಲ್ಲಿಂದ ಈವರೆಗೆ ನೂರಾರು ಸವಾಲುಗಳನ್ನು ನಾವು ಎದುರಿಸಿದ್ದೇವೆ. ಆದರೆ ಎಂದೂ ಸ್ವಾಭಿಮಾನವನ್ನು ಬಿಟ್ಟುಕೊಟ್ಟಿಲ್ಲ. ಗೋಕಾಕ್ ಚಳುವಳಿಯೂ ಇದಕ್ಕೊಂದು ಉತ್ತಮ ಉದಾಹರಣೆಯಾಗಬಹುದು ಎಂದು ಸಚಿವರು ತಿಳಿಸಿದರು. ಕಳೆದೊಂದು ವರ್ಷದಿಂದ ವಿಶ್ವವನ್ನು ಕಾಡುತ್ತಿರುವ ಹೆಮ್ಮಾರಿ ಕೋವಿಡ್-19 ದೇಶ ಹಾಗೂ ರಾಜ್ಯಕ್ಕೆ ಕಂಟಕ ಪ್ರಾಯವಾಗಿದೆ. ಜಿಲ್ಲೆಯಲ್ಲಿಯೂ ನಾನೂರಕ್ಕೂ ಅಧಿಕ ಮಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಅವರೆಲ್ಲರ ಆತ್ಮಗಳಿಗೆ ಚಿರಶಾಂತಿ ಕೋರೋಣ ಈಗಾಗಲೇ ಕೋವಿಡ್-19 ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬರುತ್ತಿದೆ. ಇದಕ್ಕೆ ಶ್ರಮಿಸಿದ ಎಲ್ಲಾ ಕೋವಿಡ್ ಯೋಧರಿಗೆ ಹಾಗೂ ಅಧಿಕಾರಿ ಸಿಬ್ಬಂದಿಗಳಿಗೆ ಕೆ. ಗೋಪಾಲಯ್ಯ ಅವರು ಕೃತಜ್ಞತೆ ಸಲ್ಲಿಸಿದರು. ಮುಂದೆ ಯುಗಾದಿವರೆಗೂ ಸಾಲು ಸಾಲು ಹಬ್ಬಗಳು, ಸುಗ್ಗಿ, ಜಾತ್ರೆ, ಉತ್ಸವಗಳು ಬರುತ್ತಿವೆ, ಎಚ್ಚರ ತಪ್ಪಿದರೆ ಮತ್ತೆ ಅಪಾಯ ಹೆಚ್ಚುತ್ತದೆ ತಮ್ಮ ಹಾಗೂ ಸಮಾಜದ ಆರೋಗ್ಯದ ಹಿತ ದೃಷ್ಠಿಯಿಂದ ದಯಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳೊಣ ಸ್ವಚ್ಚತೆ ಬಗ್ಗೆ ಗಮನಹರಿಸಿ ಕೋವಿಡ್-19 ವಿರುದ್ದದ ಹೋರಾಟದಲ್ಲಿ ಸಹಭಾಗಿಗಳಾಗೋಣ ಎಂದು ಸಚಿವರು ಕರೆ ನೀಡಿದರು. ನವೆಂಬರ್ 5 ರಿಂದ ನಗರದ ಆದಿದೇವತೆ ಶ್ರೀ ಹಾಸನಾಂಬೆಯ ದರ್ಶನೋತ್ಸವ ಇದೆ ಈ ಸಂದರ್ಭದಲ್ಲಿ ಎಲ್ಲಾರಿಗೂ ಶುಭಕೋರುತ್ತೇನೆ. ತಾಯಿ ಹಾಸನಾಂಬೆ ಎಲ್ಲಾ ಸಂಕಷ್ಟಗಳನ್ನು ಕಳೆದು ಜಿಲ್ಲೆ ಹಾಗೂ ರಾಜ್ಯ ಮತ್ತು ದೇಶಕ್ಕೆ ನೆಮ್ಮದಿ, ಸುಖ, ಶಾಂತಿ, ಯಶಸ್ಸನ್ನು ಕರುಣಿಸಲಿ. ಜನರ ಆರೋಗ್ಯ ರಕ್ಷಣೆ ಉದ್ದೇಶದಿಂದ ಈ ಬಾರಿ ಕೇವಲ ಎಲ್.ಇ.ಡಿ. ಸ್ಕ್ರೀನ್ ಮತ್ತು ಆನ್‍ಲೈನ್ ಮೂಲಕ ಹಾಸನಾಂಬ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಭಕ್ತಾದಿಗಳು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು. ಕೋವಿಡ್-19 ಲಾಕ್‍ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ 34,191 ಕಟ್ಟಡ ಕಾರ್ಮಿಕರಿಗೆ ತಲಾ 5,000 ರೂ.ಗಳಂತೆ ಒಟ್ಟು 17 ಕೋಟಿ ರೂಪಾಯಿಗಳ ನೆರವನ್ನು ರಾಜ್ಯ ಸರ್ಕಾರದಿಂದ ಒದಗಿಸಲಾಗಿದೆ. ಇದೇ ರೀತಿ ಕ್ಷೌರಿಕ ವೃತ್ತಿ ಅನುಸರಿಸುವ 1,715 ಮಂದಿ ಹಾಗೂ ಅಗಸವೃತ್ತಿ ಮಾಡುವ 18,740 ಜನರಿಗೆ ಒಟ್ಟು 1.79 ಕೋಟಿ ರೂಪಾಯಿ ಹಣವನ್ನು ಅವರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಿ ಸಂಕಷ್ಟಕ್ಕೆ ಸ್ಪಂದಿಸಲಾಗಿದೆ ಎಂದು ಸಚಿವರು ತಿಳಿಸಿದರು. ಕಾರ್ಮಿಕ ಇಲಾಖೆ ವತಿಯಿಂದ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಮೃತಪಟ್ಟ 32 ಮಂದಿ ಖಾಸಗಿ ವಾಹನ ಚಾಲಕರ ಕುಟುಂಬಗಳಿಗೆ ಒಟ್ಟಾರೆ 92.74 ಲಕ್ಷ ರೂ. ಆರ್ಥಿಕ ನೆರವು ಒದಗಿಸಲಾಗಿದೆ ಎಂದು ಸಚಿವ ಕೆ. ಗೋಪಾಲಯ್ಯ ಅವರು ಮಾಹಿತಿ ನೀಡಿದರು. ಹಾಸನ ನಗರಸಭೆ ವ್ಯಾಪ್ತಿಯ ಅಮೃತ್ ಕುಡಿಯುವ ನೀರು ಯೋಜನೆಯಡಿ ಶೇ.90 ರಷ್ಟು ಕಾಮಗಾರಿಯು ಪೂರ್ಣಗೊಂಡಿರುತ್ತದೆ. ಹೆಚ್ಚುವರಿಯಾಗಿ ರೂ.24.3 ಕೋಟಿಗಳ ಅನುದಾನ ಮಂಜೂರಾಗಿದ್ದು, ಕುಡಿಯುವ ನೀರಿನ ಪೈಪ್ ಲೈನ್ ವಿತರಣಾ ಜಾಲ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಕಾಮಗಾರಿ ಡಿಸೆಂಬರ್-2020 ರ ಮಾಹೆಯ ಅಂತ್ಯದೊಳಗೆ ಪೂರ್ಣಗೊಳ್ಳಲಿದ್ದು, ದಿನದ 24 ಗಂಟೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ಇದೇ ರೀತಿ ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರ ಮತ್ತು ಬೇಲೂರು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕುಡಿಯುವ ನೀರು ಯೋಜನೆಗಳಿಗೆ ಒಟ್ಟಾರೆ 242 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದರು. ಹಾಸನ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಘನತ್ಯಾಜ್ಯ ವಸ್ತುಗಳ ವಿಲೇವಾರಿಗೆ ಸಂಬಂಧಿಸಿದಂತೆ ಒಟ್ಟು 21 ಕೋಟಿ ರೂಪಾಯಿಗಳ ವಿಸ್ತೃತಾ ಯೋಜನಾ ವರದಿ ತಯಾರಿಸಲಾಗಿದ್ದು, ಇಲ್ಲಿಯವರೆಗೆ ರೂ. 5.9 ಕೋಟಿ ಅನುದಾನ ಬಿಡುಗಡೆಯಾಗಿದೆ. ವಿವಿಧ ಅಭಿವೃದ್ದಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅವರು ಮಾಹಿತಿ ನೀಡಿದರು. ಕಳೆದ ಮುಂಗಾರಿನಲ್ಲಿ ಜಿಲ್ಲೆಯ ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲ್ಲೂಕುಗಳು ಹೊರತುಪಡಿಸಿ ಇತರ 6 ತಾಲ್ಲೂಕುಗಳಲ್ಲಿ ಒಟ್ಟಾರೆ 350 ಕೋಟಿ ರೂ ನಷ್ಟ ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 40.66 ಕೋಟಿ ರೂಗಳ ಪರಿಹಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದರು. ಅತೀವೃಷ್ಠಿ ವೇಳೆ ಜಿಲ್ಲೆಯಲ್ಲಿ ಒಂದು ಮಾನವ ಜೀವ ಹಾನಿ ಹಾಗೂ 2 ಜಾನುವಾರು ಜೀವ ಹಾನಿ ಸಂಭವಿಸಿದ್ದು, ನಿಯಾಮಾನುಸಾರ 5.60 ಲಕ್ಷ ಪರಿಹಾರ ಪಾವತಿಸಿದೆ. ಇದೇ ರೀತಿ ಅತೀವೃಷ್ಠಿ ವೇಳೆ ಮನೆ ಸಾಮಾಗ್ರಿಗಳು ಹಾನಿಯಾಗಿದ್ದ 93 ಕುಟುಂಬಗಳಿಗೆ ತಲಾ 10,000 ರೂಗಳ ಪರಿಹಾರ ವಿತರಿಸಲಾಗಿದೆ ಎಂದರು. 360 ಮನೆಗಳಿಗೆ ಇದೇ ರೀತಿ ವಿವಿಧ ಸ್ವರೂಪದಲ್ಲಿ ಹಾನಿಯಾಗಿದ್ದು, ಫಲಾನುಭವಿಗಳಿಗೆ ಪರಿಹಾರ ಪಾವತಿಸಲು ಕ್ರಮವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಅತೀವೃಷ್ಠಿಯಿಂದ 12 ಸಾವಿರ ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕಾ ಜಮೀನು ಮತ್ತು ಬೆಳೆ ಹಾನಿಯಾಗಿದ್ದು, ಫಲಾನುಭವಿಗಳ ಖಾತೆಗೆ ನೇರವಾಗಿ ಪರಿಹಾರ ಹಣ ವರ್ಗಾವಣೆಯಾಗಲಿದೆ ಎಂದು ಕೆ. ಗೋಪಾಲಯ್ಯ ಅವರು ಮಾಹಿತಿ ನೀಡಿದರು. ಕೋವಿಡ್-19ನ ಲಾಕ್‍ಡೌನ್ ಸಮಸ್ಯೆಯಿಂದ ಮುಸುಕಿನ ಜೋಳ ಬೆಳೆದು ಆರ್ಥಿಕ ಸಂಕಷ್ಟಕ್ಕೊಳಗಾದ ರೈತರಿಗೆ ಆರ್ಥಿಕ ನೆರವು ನೀಡಲು ಪ್ರತಿ ರೈತರಿಗೆ ರೂ. 5,000 ಗಳನ್ನು ನೇರ ನಗದು ವರ್ಗಾವಣೆ ಯೋಜನೆಯಡಿಯಲ್ಲಿ ಹಾಸನ ಜಿಲ್ಲೆಯ 71,404 ರೈತರಿಗೆ ರೂ. 35 ಕೋಟಿ ರೂಪಾಯಿಗಳನ್ನು ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ರೈತರಿಗೆ ವಾರ್ಷಿಕ ತಲಾ 6,000 ರೂಪಾಯಿಗಳಂತೆ ಇದುವರೆಗೂ 2.53 ಲಕ್ಷ ರೈತರ ಕುಟುಂಬಗಳಿಗೆ ನೇರ ಹಣ ವರ್ಗಾವಣೆ ಮಾಡಲಾಗಿದೆ ಹಾಗೂ ಕೃಷಿ ಯಂತ್ರಧಾರೆ ಯೋಜನೆಯಡಿ ಒಟ್ಟು 21 ಬಾಡಿಗೆ ಆಧಾರಿತ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ 6 ಕೇಂದ್ರಗಳನ್ನು ಹೊಸದಾಗಿ ಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2020-21ನೇ ಸಾಲಿಗೆ ವಾರ್ಷಿಕ 55 ಲಕ್ಷ ಮಾನವ ದಿನಗಳ ಹಾಗೂ 267.2 ಕೋಟಿಗಳ ಆರ್ಥಿಕ ಗುರಿಯನ್ನು ನಿಗದಿಪಡಿಸಲಾಗಿದೆ. ಈವರೆಗಿನ ಗುರಿಯಲ್ಲಿ ಶೇ. 89 ರಷ್ಟು ಪ್ರಗತಿ ಸಾಧನೆ ಮಾಡಿದ್ದು, 103 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದರು. ಜಿಲ್ಲೆಗೆ ವಿವಿಧ ವಸತಿ ಯೋಜನೆಗಳಡಿಯಲ್ಲಿ 2020-21 ನೇ ಸಾಲಿಗೆ 5647 ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡುವ ಗುರಿಹೊಂದಲಾಗಿದ್ದು, ಅದರಲ್ಲಿ 2173 ಮನೆಗಳು ಪೂರ್ಣಗೊಂಡಿದ್ದು, ಉಳಿದ 3474 ಮನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ ಸದರಿ ಫಲಾನುಭವಿಗಳಿಗೆ ಈಗಾಗಲೆ ರೂ. 36.49 ಕೋಟಿ ಹಣವನ್ನು ನೀಡಲಾಗಿರುತ್ತದೆ. ಇದಲ್ಲದೆ ಕೇಂದ್ರ ಸರ್ಕಾರದ ಪಿ.ಎಂ.ಎ.ವೈ ವಸತಿ ಯೋಜನೆಯಡಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗಳಿಗೆ 20 ಮನೆಗಳಂತೆ ಒಟ್ಟು 267 ಗ್ರಾಮ ಪಂಚಾಯಿತಿಗಳಿಗೆ 5,340 ಮನೆಗಳನ್ನು ಸರ್ಕಾರ ಮಂಜೂರು ಮಾಡಿದ್ದು, ನಿಯಮಾನುಸಾರ ಫಲಾನುಭವಿಗಳನ್ನು ಆಯ್ಕೆ ಮಾಡಲು ಕ್ರಮವಹಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ಕುಟುಂಬಗಳಿಗೆ 3.38 ಲಕ್ಷ ಶೌಚಾಲಯ ನಿರ್ಮಿಸಲಾಗಿದ್ದು, 22.92 ಕೋಟಿ ರೂಗಳನ್ನು ವೆಚ್ಚ ಮಾಡಲಾಗಿದೆ. ಇದರಲ್ಲಿ ಪ.ಜಾತಿ, ಪ.ಪಂಗಡಕ್ಕೆ ಪ್ರತಿ ಕುಟುಂಬಕ್ಕೆ ರೂ. 15,000 ದಂತೆ ಮತ್ತು ಇತರೆ ಜನಾಂಗದ ಪ್ರತಿ ಕುಟುಂಬಕ್ಕೆ ರೂ. 12,000 ದಂತೆ ಸಹಾಯಧನ ಪಾವತಿಸಲಾಗಿದೆ ಎಂದರು. ರಾಜ್ಯದಲ್ಲಿ ಎರಡನೇ ಅತಿದೊಡ್ಡ ನಿಗಧಿತ ಕೋವಿಡ್ ಆಸ್ಪತ್ರೆ ಖ್ಯಾತಿಯ, ಹಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸಂದರ್ಭದಲ್ಲಿಯೂ ಕೋವಿಡೇತರ ಚಿಕಿತ್ಸೆಯನ್ನೂ ಉತ್ಕೃಷ್ಟ ದರ್ಜೆಯಲ್ಲಿ ನೀಡಲಾಗುತ್ತಿರುವುದು ಅಭಿನಂದನಾರ್ಹ ಎಂದು ಸಚಿವರು ಶ್ಲಾಘಿಸಿದರು. ಹಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ 13,000 ಲೀಟರ್ ಸಾಮರ್ಥ್ಯದ ಆಮ್ಲಜನಕ ಶೇಖರಣಾ ಘಟಕವೂ ಇದ್ದು 60 ಹಾಸಿಗೆಗಳ ತೀವ್ರ ನಿಗಾ ಘಟಕ ಹಾಗೂ 340 ಹಾಸಿಗೆಗಳ ವಾರ್ಡ್ ಸೇರಿದಂತೆ ಎಲ್ಲಾ 400 ಹಾಸಿಗೆಗಳಿಗೂ ಕೇಂದ್ರಿಕೃತ ಆಮ್ಲಜನಕ ಸರಬರಾಜು ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಇದಲ್ಲದೆ ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕಿನಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿಯೂ ಒಟ್ಟಾರೆ 340 ಹಾಸಿಗೆಗಳು ಲಭ್ಯವಿದೆ. ಇದಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೋವಿಡ್ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕೆ. ಗೋಪಾಲಯ್ಯ ಅವರು ತಿಳಿಸಿದರು. ಹಿಂದುಳಿದ ವರ್ಗದವರಿಗಾಗಿ ಜಿಲ್ಲೆಯಲ್ಲಿ ಒಟ್ಟು 117 ಸಮುದಾಯ ಭವನಗಳ ನಿರ್ಮಾಣಕ್ಕೆ ಒಟ್ಟು ರೂ.1502 ಲಕ್ಷ ಸಹಾಯಧನ ಬಿಡುಗಡೆ ಮಾಡಿದ್ದು, 29 ಕಾಮಗಾರಿಗಳು ಪೂರ್ಣಗೊಂಡಿವೆ ಹಾಗೂ 88 ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ ಎಂದು ಅವರು ತಿಳಿಸಿದರು. ಜಿಲ್ಲೆಯ ಅಲೆಮಾರಿ/ ಅರೆಅಲೆಮಾರಿ ಕಾಲೋನಿಗಳಲ್ಲಿ 13 ಸಮುದಾಯ ಭವನಗಳು ಮತ್ತು 44 ಕಡೆಗಳಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ಕಾಮಗಾರಿಗಳು ಮಂಜೂರಾಗಿದ್ದು ಒಟ್ಟು ರೂ. 406 ಲಕ್ಷ ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಸಚಿವರು ಮಾಹಿತಿ ನೀಡಿದರು. 2020-21ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ.ಜಾತಿ ಮತ್ತು ಪ.ವರ್ಗದ ಆರ್ಥಿಕ ಅಭಿವೃದ್ದಿಗಾಗಿ ಜಿಲ್ಲೆಗೆ ರೂ.52 ಕೋಟಿ ಗಳನ್ನು ಹಂಚಿಕೆ ಮಾಡಲಾಗಿದೆ. ಇದೇ ರೀತಿ ಜಿಲ್ಲೆಯ ವಿವಿಧ ಇಲಾಖೆಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉಪ ಯೋಜನೆಗಳಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮತ್ತು ಯೋಜನೆಗಳ ಅನುಷ್ಠಾನಕ್ಕೆ ಒಟ್ಟು 250 ಕೋಟಿ ರೂಪಾಯಿಗಳನ್ನು ನಿಗಧಿಪಡಿಸಿದ್ದು, ಅಕ್ಟೋಬರ್ ಅಂತ್ಯಕ್ಕೆ ಶೇ.70 ಕ್ಕೂ ಹೆಚ್ಚಿನ ಸಾಧನೆ ಮಾಡಲಾಗಿದೆ ಎಂದು ಅವರು ತಿಳಿಸಿದರು. 2020ರ ಏಪ್ರಿಲ್ ಮಾಹೆಯಿಂದ ಅಕ್ಟೋಬರ್‍ವರೆಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವತಿಯಿಂದ ಜಿಲ್ಲೆಗೆ ಒಟ್ಟು 37.83 ಲಕ್ಷ ಕ್ವಿಂಟಾಲ್ ಅಕ್ಕಿ, 60 ಸಾವಿರ ಕ್ವಿಂಟಾಲ್ ಗೋಧಿ, 2.10 ಲಕ್ಷ ಕ್ವಿಂಟಾಲ್ ರಾಗಿ, 27 ಸಾವಿರ ಕ್ವಿಂಟಾಲ್ ತೊಗರಿಬೇಳೆ/ಕಡಲೆಕಾಳು ಹಾಗೂ 1,200 ಕೆ.ಎಲ್ ಸೀಮೆಎಣ್ಣೆ ಹಂಚಿಕೆ ಮಾಡಲಾಗಿದೆ ಎಂದರು. 2019-20ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಾಲ್‍ಗೆ 1,815 ರೂಗಳಂತೆ ಹಾಗೂ ಗ್ರೇಡ್-ಎ ಭತ್ತಕ್ಕೆ ಪ್ರತಿ ಕ್ವಿಂಟಾಲ್ 1,835 ರೂಗಳಂತೆ ಜಿಲ್ಲೆಯಲ್ಲಿ 21,240 ಕ್ವಿಂಟಾಲ್ ಭತ್ತ ಖರೀದಿಸಲಾಗಿರುತ್ತದೆ ಎಂದು ಸಚಿವರು ಮಾಹಿತಿ ನೀಡಿದರು. ಇದೇ ರೀತಿ ರಾಗಿಯನ್ನು ರಾಗಿ ಬೆಳೆಯುವ ಎಲ್ಲಾ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್‍ನಂತೆ ಗರಿಷ್ಠ ಬೆಂಬಲ ಬೆಲೆಯೊಂದಿಗೆ 3,40 ಲಕ್ಷ ಕ್ವಿಂಟಾಲ್ ರಾಗಿ ಖರೀದಿಸಲಾಗಿರುತ್ತದೆ ಎಂದರಲ್ಲದೆ, ರಾಜ್ಯ ಹೆದ್ದಾರಿ ನಿರ್ವಹಣೆಗೆ 518 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, 548 ಕಿ.ಮೀ ರಸ್ತೆ ನಿರ್ವಹಣೆ ಮಾಡಲಾಗುವುದು, ಇದೇ ರೀತಿ 709 ಲಕ್ಷ ರೂ ವೆಚ್ಚದಲ್ಲಿ 1,012 ಕಿ.ಮೀ ಜಿಲ್ಲಾ ಮಟ್ಟದ ಮುಖ್ಯ ರಸ್ತೆ ನಿರ್ವಹಣೆ ಮಾಡಲು ಕ್ರಮವಹಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 49.7 ಕೋಟಿ ರೂ ವೆಚ್ಚದಲ್ಲಿ ನಾಲ್ಕನೇ ಹಂತದ 25 ಪ್ಯಾಕೇಜ್ ಕಾಮಗಾರಿಗಳಿಗೆ ಅನುಮೋದನೆಯಾಗಿದ್ದು, 375 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು ಯೋಜಿಸಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಸಚಿವರು ಹೇಳಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜ್, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಮ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಿ.ಎನ್. ನಂದಿನಿ, ಉಪ ವಿಭಾಗಾಧಿಕಾರಿ ಬಿ.ಎ. ಜಗದೀಶ್, ತಹಶೀಲ್ದಾರ್ ಶಿವಶಂಕರಪ್ಪ ಹಾಗೂ ಮತ್ತಿತರರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. *ಹರೀಶ್ ಹೆಚ್ ಆರ್ ಕೋಟೆ * ****************

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರೈತ ದಿನ ಆಚರಣೆ-ಸಾವಯವ ಕೃಷಿ ಪದ್ಧತಿಗೆ ಸಲಹೆ.

👇👇👇👇👇👇👇👇👇👇👇👇👇 ರೈತ ದಿನಾಚರಣೆ https://youtube.com/shorts/EGX4c_IVzY8?si=erkB19_6MH0KmBG6 ಮೊಸಳೆಹೊಸಹಳ್ಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ರಾಷ್ಟ್ರೀಯ ರೈತರ ದಿನದ ಅಂಗವಾಗಿ ಸಾವಯವ ಕೃಷಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪುಣ್ಯಭೂಮಿ ಪರಿಸರ ಪ್ರಶಸ್ತಿ ಮತ್ತು ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿಯ ಸಾವಯವ ಕೃಷಿಕರು, ಪ್ರಗತಿಪರ ರೈತರು ಮತ್ತು ಪಾರಂಪರಿಕ ವೈದ್ಯರಾದ ಶ್ರೀಯುತ ರವಿಶಂಕರ್ ಅವರು ಆಗಮಿಸಿದ್ದರು. ಸಂಸ್ಥೆಯಲ್ಲಿ ರೈತರಿಂದ ಗಿಡ ನೆಡುವುದರ ಮೂಲಕ ರೈತರ ದಿನವನ್ನು ಉದ್ಘಾಟಿಸಲಾಯಿತು. ಸಾವಯವ ಕೃಷಿಯನ್ನು ಉದ್ದೇಶಿಸಿ ಮಾತನಾಡಿದ ಇವರು ವಿದ್ಯಾರ್ಥಿಗಳಿಗೆ ಸಾವಯವ ಕೃಷಿಯ ಕ್ರಮಗಳು, ಆರೋಗ್ಯಕರ ಪ್ರಯೋಜನಗಳನ್ನು ವಿವರಿಸುತ್ತಾ, ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸದೇ ಕೇವಲ ಹಸುವಿನ ಸಗಣಿ ಮತ್ತು ಗಂಜುಳದಿಂದ ರಸಗೊಬ್ಬರ ಮತ್ತು ಸಾವಯವ ಕೀಟನಾಶಕವನ್ನು ತಯಾರಿಸಿ ಮಣ್ಣಿನ ಫಲವತ್ತತೆಯನ್ನು ಹೇಗೆ ಹೆಚ್ಚಿಸುವುದು ಮತ್ತು ಯಾವ ಕಾಲ, ನಕ್ಷತ್ರ, ಹವಾಮಾನ ಮತ್ತು ಮಾಸಕ್ಕನುಗುಣವಾಗಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ರೈತರು ಸೂಕ್ತವಾಗಿ ಅರಿತಿರಬೇಕು ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಗೊಳಿಸಿಕೊಳ್ಳ

ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನ ಆಚರಣೆ.

ಹಾಸನ ತಾಲ್ಲೂಕಿನ ಮೊಸಳೆಹೊಸಹಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕದ ವತಿಯಿಂದ ರೆಡ್ ರಿಬ್ಬನ್ ಕ್ಲಬ್ ಸಹಯೋಗದೊಂದಿಗೆ, ವಿಶ್ವ ಏಡ್ಸ್ ದಿನದ ಪ್ರಯುಕ್ತ ಸಂಸ್ಥೆಯಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. . ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ಜಿಲ್ಲಾ ಏಡ್ಸ್ ಪ್ರಿವೆನ್ಷನ್ ಮತ್ತು ಕಂಟ್ರೋಲ್ ಘಟಕದ ಸೂಪರ್ವೈಸರ್ ಶ್ರೀಯುತ ರವಿಕುಮಾರ್ ವಿ. ಬಲ್ಲೇನಹಳ್ಳಿ ಯವರು ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ನಾಗೇಶ್ ರವರು ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಿದರು.  ಮುಂದುವರೆದು ಸಂಸ್ಥೆಯಲ್ಲಿ ಏಡ್ಸ್/ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸವಾಗಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಪೋಸ್ಟರ್ ಡಿಸೈನ್ ಮತ್ತು ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಮತ್ತು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು ಸಂಸ್ಥೆಯ ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀಯುತ ವೀರಭದ್ರಸ್ವಾಮಿ ಕೆ.ಎಂ. ರವರು, ಎನ್.ಎಸ್.ಎಸ್. ಚಟುವಟಿಕೆಯ ಅಡಿಯಲ್ಲಿ ವಿದ್ಯಾರ್ಥಿಗಳು ಸುತ್ತಮುತ್ತಲ, ಮೂರು ಗ್ರಾಮಗಳನ್ನು ದತ್ತು ಪಡೆದು ಸ್ವಚ್ಛತೆ, ಆರೋಗ್ಯ, ಉನ್ನತ ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಜಾಗೃತಿ

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  7090899728 Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  070908 99728